Menu

ಹೋಶೇಯನು 12

IRV

1 ಎಫ್ರಾಯೀಮು ಮೇಯಿಸುವ ಮಂದೆಯು ಗಾಳಿಯೇ, ಹಿಂದಟ್ಟುವ ಬೇಟೆಯು ಮೂಡಣಗಾಳಿಯೇ. ಅದು ಮೋಸವನ್ನೂ, ಹಿಂಸೆಯನ್ನೂ ನಿರಂತರ ಹೆಚ್ಚೆಚ್ಚಾಗಿ ನಡೆಸುತ್ತದೆ; ಅಶ್ಶೂರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ; ಐಗುಪ್ತಕ್ಕೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತದೆ. 2 ಯೆಹೋವನು ಯೆಹೂದದ ಮೇಲೆ ವ್ಯಾಜ್ಯಕ್ಕೆ ತೊಡಗಿದ್ದಾನೆ, ಯಾಕೋಬನ್ನು ಅದರ ನಡತೆಗೆ ತಕ್ಕ ಹಾಗೆ ದಂಡಿಸುವನು, ಅದರ ದುಷ್ಕೃತ್ಯಗಳಿಗೆ ಪ್ರತಿಕಾರಮಾಡುವನು. 3 ಯಾಕೋಬನು ಗರ್ಭದಲ್ಲಿ ತನ್ನ ಅಣ್ಣನ ಹಿಮ್ಮಡಿಯನ್ನು ಎಳೆದನು, ಪೂರ್ಣಪ್ರಾಯದಲ್ಲಿ ದೇವರೊಂದಿಗೆ ಹೋರಾಡಿದನು ; 4 ಹೌದು, ದೇವದೂತನ ಸಂಗಡ ಹೋರಾಡಿ ಗೆದ್ದನು; ಅಳುತ್ತಾ ಆತನ ಕೃಪೆಯನ್ನು ಬೇಡಿಕೊಂಡನು. ಯೆಹೋವನೆಂಬ ಸೇನಾಧೀಶ್ವರನಾದ ದೇವರು ಅವನನ್ನು ಬೇತೇಲಿನಲ್ಲಿಯು ಕಂಡು ಅಲ್ಲಿ ಅವನೊಡನೆ ಮಾತನಾಡಿದನು. 5 ಯೆಹೋವನೆಂಬುದೇ ಆತನನ್ನು ಸ್ಮರಿಸುವ ನಾಮಧೇಯ. 6 ಇಸ್ರಾಯೇಲೇ, ನೀನೂ ನಿನ್ನ ದೇವರ ಕಡೆಗೆ ತಿರುಗಿಕೋ; ನೀತಿ, ಪ್ರೀತಿಗಳನ್ನು ಅನುಸರಿಸಿ ನಿನ್ನ ದೇವರನ್ನು ಎಡೆಬಿಡದೆ ನಿರೀಕ್ಷಿಸಿಕೊಂಡಿರು. 7 ಕಾನಾನು! ಅದರ ಕೈಯಲ್ಲಿ ಮೋಸದ ತ್ರಾಸು ಇದೆ; ಕಸಕೊಳ್ಳಬೇಕೆಂಬದೇ ಅದರ ಆಶೆ. 8 ಎಫ್ರಾಯೀಮು, “ನಾನು ಐಶ್ವರ್ಯವಂತನೇ ಹೌದು, ಆಸ್ತಿಯನ್ನು ಪಡೆದಿದ್ದೇನೆ; ನನ್ನ ದುಡಿತದಲ್ಲೆಲ್ಲಾ ಪಾಪವೆನಿಸಿಕೊಳ್ಳುವ ದೋಷವೇನೂ ತೋರಲಿಲ್ಲ” ಎಂದು ಅಂದುಕೊಳ್ಳುತ್ತದೋ? 9 ನೀನು ಐಗುಪ್ತ ದೇಶದಲ್ಲಿ ಇದ್ದಂದಿನಿಂದ ನಾನೇ ಯೆಹೋವನೆಂಬ ನಿನ್ನ ದೇವರಾಗಿದ್ದೇನೆ; ಜಾತ್ರೆಯ ಕಾಲದಲ್ಲಿ ವನವಾಸಮಾಡುವಂತೆ ಗುಡಾರಗಳಲ್ಲಿ ವಾಸಿಸುವ ಗತಿಗೆ ನಿನ್ನನ್ನು ಪುನಃ ತರುವೆನು. 10 ನಾನು ಪ್ರವಾದಿಗಳಿಗೆ ನುಡಿದಿದ್ದೇನೆ, ಬಹಳ ದಿವ್ಯದರ್ಶನಗಳನ್ನು ದಯಪಾಲಿಸಿದ್ದೇನೆ. ಪ್ರವಾದಿಗಳ ಮೂಲಕ ಸೂಚಕಕಾರ್ಯಗಳನ್ನು ನಡೆಸಿದ್ದೇನೆ. 11 ಗಿಲ್ಯಾದು ಅಧರ್ಮಮಯವೋ? ಅದು ಶೂನ್ಯದ ಗತಿಗೆ ಬರುವುದು; ಗಿಲ್ಗಾಲಿನಲ್ಲಿ ಗೋಮೇಧವು ನಡೆಯುವುದೋ? ಅಲ್ಲಿನ ಯಜ್ಞವೇದಿಗಳು ಹೊಲದ ನೇಗಿಲ ಗೆರೆಗಳಲ್ಲಿ ಕಲ್ಲುಕುಪ್ಪೆಗಳಾಗಿ ಸಿಕ್ಕುವವು. 12 ಯಾಕೋಬನು ಪದ್ದನ್ ಅರಾಮಿಗೆ ಓಡಿಹೋದನು; ಇಸ್ರಾಯೇಲನು ಮದುವೆಗಾಗಿ ಜೀತಮಾಡಿದನು, ಹೆಣ್ಣಿಗೋಸ್ಕರ ಕುರಿಗಳನ್ನು ಕಾದನು. 13 ಯೆಹೋವನು ಇಸ್ರಾಯೇಲನ್ನು ಪ್ರವಾದಿಯ ಮುಖಾಂತರ ಐಗುಪ್ತದೊಳಗಿಂದ ಪಾರುಮಾಡಿದನು; ಪ್ರವಾದಿಯ ಮೂಲಕ ಅದು ರಕ್ಷಿಸಲ್ಪಟ್ಟಿತು. 14 ಎಫ್ರಾಯೀಮು ಯೆಹೋವನನ್ನು ಅತಿ ತೀಕ್ಷ್ಣವಾಗಿ ರೇಗಿಸಿದೆ, ಆದಕಾರಣ ಅದರ ಒಡೆಯನು ಅದರ ರಕ್ತಾಪರಾಧವನ್ನು ಅದರ ಮೇಲೆ ಹೊರಿಸಿ, ಅದು ಮಾಡಿದ ಅವಮಾನವನ್ನು ಅದಕ್ಕೆ ಹಿಂದಿರುಗಿಸುವನು.

Everything we make is available for free because of a generous community of supporters.

Donate