Menu

ಕೀರ್ತನೆಗಳು 95

IRV

1 ಬನ್ನಿರಿ, ಯೆಹೋವನಿಗೆ ಉತ್ಸಾಹದಿಂದ ಹಾಡೋಣ; ನಮ್ಮ ರಕ್ಷಕನಾದ ಶರಣನಿಗೆ ಜಯಘೋಷ ಮಾಡೋಣ. 2 ಕೃತಜ್ಞತಾಸ್ತುತಿಯೊಡನೆ ಆತನ ಸನ್ನಿಧಿಗೆ ಸೇರೋಣ; ಕೀರ್ತನೆಗಳಿಂದ ಆತನಿಗೆ ಜಯಘೋಷ ಮಾಡೋಣ. 3 ಯೆಹೋವನು ಮಹಾದೇವರೂ, ಎಲ್ಲಾ ದೇವರುಗಳಲ್ಲಿ ಮಹಾರಾಜನೂ ಆಗಿದ್ದಾನೆ. 4 ಭೂಮಿಯ ಅಗಾಧವು ಆತನ ಕೈಯಲ್ಲಿರುತ್ತದೆ; ಪರ್ವತಶಿಖರಗಳು ಆತನವೇ. 5 ಆತನೇ ಸಮುದ್ರವನ್ನು ನಿರ್ಮಿಸಿದವನು; ಅದು ಆತನದೇ, ಒಣನೆಲವು ಆತನ ಕೈಕೆಲಸವೇ. 6 ಬನ್ನಿರಿ; ನಮ್ಮ ನಿರ್ಮಾಣಿಕನಾದ ಯೆಹೋವನಿಗೆ ಸಾಷ್ಟಾಂಗವೆರಗಿ ಆರಾಧಿಸೋಣ. 7 ಆತನು ನಮ್ಮ ದೇವರು; ನಾವೋ ಆತನು ಪಾಲಿಸುವ ಪ್ರಜೆಯೂ, ಆತನ ಕೈಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಶಬ್ದಕ್ಕೆ ಕಿವಿಗೊಟ್ಟರೆ ಎಷ್ಟೋ ಒಳ್ಳೇಯದು. 8 ನಿಮ್ಮ ಹಿರಿಯರು ಅರಣ್ಯದಲ್ಲಿರುವ ಮೆರೀಬದಲ್ಲಿ , ಮಸ್ಸಾದಲ್ಲಿ ಮಾಡಿದ ದಿನದಂತೆ, ನೀವು ನಿಮ್ಮ ಹೃದಯವನ್ನು ಕಠಿಣಮಾಡಿಕೊಳ್ಳಬೇಡಿರಿ. 9 ಅಲ್ಲಿ ಅವರು ನನ್ನನ್ನು ಪರೀಕ್ಷಿಸಿದರು; ನನ್ನ ಮಹತ್ಕಾರ್ಯಗಳನ್ನು ನೋಡಿದರೂ ನನ್ನನ್ನು ಪರಿಶೋಧಿಸಿದರು. 10 ನಾನು ನಲ್ವತ್ತು ವರ್ಷ ಆ ಸಂತತಿಯವರ ವಿಷಯದಲ್ಲಿ ಬೇಸರಗೊಂಡೆನು; “ಈ ಜನರು ಹೃದಯದಲ್ಲಿ ತಪ್ಪಿಹೋಗುವವರು, ನನ್ನ ಆಜ್ಞೆಗಳಿಗೆ ವಿಧೇಯರಾಗದವರು " ಎಂದು ಹೇಳಿದೆನು. 11 ಆದುದರಿಂದ ಇವರು, “ನನ್ನ ವಿಶ್ರಾಂತಿಯಲ್ಲಿ ಸೇರಬಾರದು” ಎಂದು ಕೋಪಗೊಂಡು ಪ್ರಮಾಣಮಾಡಿದೆನು.

Everything we make is available for free because of a generous community of supporters.

Donate